ಮೊಹರಮ್
ಮುಸ್ಲಿಮರು ಹಿಜರಿ ಶಕದ ಮೊದಲ ತಿಂಗಳಲ್ಲಿ ಆಚರಿಸುವ ಒಂದು ಹಬ್ಬ. ಅರಬ್ಬೀ ಭಾಷೆಯಲ್ಲಿ ಇದಕ್ಕೆ ನಿಷಿದ್ಧ ಎಂಬ ಅರ್ಥವಿದೆ. ಇಸ್ಲಾಮ್ ಧರ್ಮ ಸ್ಥಾಪನೆಯ ಮೊದಲ ಅರಬ್‍ದೇಶದಲ್ಲಿ ಈ ತಿಂಗಳಲ್ಲಿ ಧಾರ್ಮಿಕ ದೃಷ್ಟಿಯಿಂದ ಯುದ್ಧ ನಿಷಿದ್ಧವಾಗಿತ್ತು.

ಮೊಹರಮ್ ಸಂತೋಷದ ಹಬ್ಬವಲ್ಲ. ಇದು ಅರಬ್‍ದೇಶದ ಕರ್ಬಲಾ ಮೈದಾನದ ಹತ್ಯಾಕಾಂಡವನ್ನು ನೆನಪಿಗೆ ತರುತ್ತದೆ. ಅಲಿಯ ಮಗ ಹುಸೇನ್ ಆ ಮೈದಾನದಲ್ಲಿ ಬಲಿಯಾದ ದಿನದ ನೆನಪಿಗಾಗಿ ಪ್ರತಿವರ್ಷ ಮುಸ್ಲಿಮರು ಸ್ಮರಣವಿಧಿಯನ್ನು ಆಚರಿಸುತ್ತಾರೆ. ಇದರ ಹಿನ್ನಲೆ ಹೀಗಿದೆ : ಅರಬ್‍ದೇಶದ ಖುರೈಪ್ ಎಂಬ ವಂಶದಲ್ಲಿ `ಬಹೀಮಹಸೂಮ್ ಬನೀ ಉಮಯ್ಯ `ಬನ್ನಿ ಹಾಷಿಮ್‍ಎಂಬ ಮೂರು ಪ್ರಬಲ ಒಳಪಂಗಡಗಳಿದ್ದವು. ಈ ವಂಶದಲ್ಲಿ ಹುಟ್ಟಿದ ಮಹಮ್ಮದ್ ಪೈಗಂಬರ್ ಇಸ್ಲಾಮ್ ಧರ್ಮವನ್ನು ಸ್ಥಾಪಿಸಿದ ಮೇಲೆ ಅವರ ದಾಯಾದಿ ಮತ್ಸರ್ಯ ಹಾಗೂ ಅಂತಃಕಲಹಗಳು ಬಲುಮಟ್ಟಿಗೆ ಕಡಿಮೆಯಾಗಿದ್ದುವಾದರೂ ಅವನು ದೈವಾಧೀನನಾದ ಮೇಲೆ ಈ ಕಲಹಗಳು ಮತ್ತೆ ಪ್ರಜ್ವಲಿಸಿದವು. ಮಹಮ್ಮದ್‍ನ ಅಳಿಯ ಹಾಗೂ ನಾಲ್ಕನೆಯ ಖಲೀಫನಾದ (ನಾಯಕ) ಅಲಿಯ ಮರಣಾನಂತರ ಖಲೀಫ ಸ್ಥಾನಕ್ಕೆ ಯಾರು ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳು ಎದ್ದವು. ಕೊನೆಗೆ ಬನೀ ಉಮಯ್ಯ ಪಂಗಡದ ಮಾವಿಯಾ ಐದನೆಯ ಖಲೀಫನಾದ. ಆತ ಮೃತನಾದ ಮೆಲೆ ಅವನ ಮಗ ಯುಜೀದ ತಾನೇ ನಾಯಕ ಪಟ್ಟಕ್ಕೆ ಅರ್ಹನೆಂದೂ ಮತ್ತು ತಾನೇ ಖಲೀಫನೆಂದೂ ಘೋಷಿಸಿಕೊಂಡ. ಅದನ್ನು ಅಲಿಯ ಮಗ ಹುಸೇನ ಮತ್ತು ಇತರರು ವಿರೋಧಿಸಿದರು. ಆಗ ಯುಜೀದ ಅವರನ್ನೆಲ್ಲ ಕೊಂದುಹಾಕಲು ಸೈನ್ಯವನ್ನು ಕಳುಹಿಸಿದ. ಹಿಜರಿ 61ರಲ್ಲಿ ಮೆಕ್ಕಾ ನಗರದಿಂದ ಸುಮಾರು 110 ಕಿ.ಮೀ. ದೂರದ ಕೂಫಾ ಎಂಬ ಪಟ್ಟಣದ ಬಳಿ ಇರುವ ಕರ್ಬಲಾ ಮೈದಾನದಲ್ಲಿ ತಂಗಿದ್ದ ಅಲಿಯ ಮಗ ಹುಸೇನ, ಅವನ ಮಕ್ಕಳು, ಸಂಸಾರದವರು ಮತ್ತು ಪರಿವಾರದವರನ್ನು ಕೊಂದುಹಾಕಿಸಿದ. ಖಲೀಫ ಸ್ಥಾನಕ್ಕೆ ನಡೆದ ಕೌಟಂಬಿಕ ಯುದ್ಧ ಕೊನೆಗೊಂಡಿತು. ಹುಸೇನ ಮೊಹರಮ್ ತಿಂಗಳ ಹತ್ತನೆಯ ತಾರೀಖು ಶುಕ್ರವಾರ (ಕ್ರಿ.ಶ. 680 ಅಕ್ಟೋಬರ್ 10) ಹುತಾತ್ಮನಾದ. ಅದ್ದರಿಂದ ಮುಸ್ಲಿಮರಿಗೆ ಶೋಕದ ದಿವಸ. ಹೀಗೆ ಪ್ರಾಣತೆತ್ತವರು ಮೊಹರಮ್ ತಿಂಗಳ ಪ್ರಾರಂಭದಿಂದಲೇ ಕಷ್ಟನಷ್ಟಗಳನ್ನು ಅನುಭವಿಸಿದುದರಿಂದ ಮುಸ್ಲಿಮರಲ್ಲಿ ಶೋಕ ದಿನಾಚರಣೆ ಆ ತಿಂಗಳ ಪ್ರಾರಂಭದಿಂದಲೇ ಆರಂಭವಾಗುತ್ತದೆ. ಮೋಹರಮ್ ಏಳು, ಎಂಟು ಮತ್ತು ಒಂಬತ್ತನೆಯ ತಾರೀಕಿನ ದಿನಗಳಲ್ಲಿ ಹುಸೇನ್ ಹಾಗೂ ಅವರ ಪರಿವಾರದವರಿಗೆ ಕುಡಿಯಲು ನೀರೂ ಸಿಕ್ಕದೆ ತೊಂದರೆ ಪಟ್ಟರು. ಶೋಕದ ದೃಷ್ಟಿಯಿಂದ ಈ ದಿವಸಗಳಿಗೆ ಹೆಚ್ಚಿನ ಮಹತ್ತ್ವ ಇದೆ.

ಮೊಹರಮ್ ತಿಂಗಳಲ್ಲಿ ನಡೆದ ಈ ಹತ್ಯಾಕಾಂಡ ಧರ್ಮಕ್ಕು ಅಧರ್ಮಕ್ಕೂ ನಡೆದ ಸಾಂಕೇತಿಕ ಸಮರ ಎನ್ನಬಹುದು. ನ್ಯಾಯ, ನೀತಿ, ದಾನ, ಧರ್ಮ, ಹಾಗೂ ಋಜುಮಾರ್ಗದಿಂದ ನಡೆಯುವವನೇ ಋಲೀಫನಾಗಬೇಕಾದ ಸ್ಥಾನದಲ್ಲಿ ಕುಡುಕ, ವ್ಯಭಿಚಾರಿ, ದುರಹಂಕಾರಿಯಾದ ಯುಜೀದನ ಆಡಳಿತದಿಂದ ಜನತೆಯನ್ನು ಪಾರುಮಾಡಲು, ಇಸ್ಲಾಮ್ ಧರ್ಮದ ನಾಸ ತಡೆಗಟ್ಟಲು ಸತ್ತವರ ಕಥೆಯಾದ ಕಾರಣದಿಂದ ಮೊಹರಮ್ ಹಬ್ಬಕ್ಕೆ ಪ್ರಾಶಸ್ತ್ಯ ಬಂದಿದೆ.
ಮೊಹರಮ್ ಹಬ್ಬದ ದಿವಸ ದೊಡ್ಡ ದೊಡ್ಡ ತಾಬೂತುಗಳ (ತಾಜಿಯಾ) ಮತ್ತು ಪಂಜಾಗಳ ಮೆರವಣಿಗೆ ಮಾಡಿ ನೀರಿನಲ್ಲಿ ಬಿಡುತ್ತಾರೆ. ಕೆಲವು ವೇಳೆ ತಾಜಿಯಾ ಇಡುವ ಸ್ಥಳದ ಮುಂದೆ ಒಂದು ಗುಂಡಿ ಮಾಡಿ ಅದರಲ್ಲಿ ಬೆಂಕಿ ಉರಿಸಿಕೊಂಡ ಹಾಯುತ್ತಾರೆ.

ಈಜಿಪ್ಟ್, ತುರ್ಕಿಸ್ತಾನ, ಸಿರಿಯ, ಅರಬ್, ಆಫ್‍ಘಾನಿಸ್ತಾನ, ಇರಾಕ್ ಮುಂತಾದ ದೇಶಗಳಲ್ಲಿ ತಾಜಿಯಾ ಪದ್ಧತಿ ಇಲ್ಲ ಎನ್ನಲಾಗಿದೆ. ಈ ಪದ್ಧತಿ ಮಹಮ್ಮದ್ ಪೈಗಂಬರನ ಅನಂತರ ಸುಮಾರು ಏಳು-ಎಂಟನೂರು ವರ್ಷಗಳ ಬಳಿಕ ಬಳಕೆಯಲ್ಲಿ ಬಂದಿದೆ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ವಿವಿಧ ಜನಾಂಗಗಳಲ್ಲಿ ಕಾಣಬರುತ್ತಿದ್ದ ಉತ್ಸವ ಪದ್ಧತಿಯೇ ತಾಜಿóಯಾ ಪದ್ಧತಿ ಹರಡುವುದಕ್ಕೆ ಕಾರಣವಿರಬಹುದು.

ಕರ್ಬಲಾ ಕಾಳಗದಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರುವ ಫಾತೆಹಾ (ಪ್ರಾರ್ಥನೆ) ಮೊಹರಮ್‍ನಲ್ಲಿ ನಡೆಯುತ್ತದೆ. ಇಂಥ ಕೂಟಗಳು ಬರುಬರುತ್ತ ಭಾರತದಲ್ಲಿ ಶೋಕಮೂಲವಾದ ಉತ್ಸವ ರೂಪದಲ್ಲಿ ಅಚರಣೆಗೆ ಬಂದಿವೆ. ಈ ಹಬ್ಬದ ದಿವಸ ದೊಡ್ಡ ದೊಡ್ಡ ತಾಬೂತುಗಳ (ತಾಜಿóಯಾ) ಮತ್ತು ಪಂಜಾಗಳ (ಹಸ್ತಗಳ) ಮೆರವಣಿಗೆ ಮಾಡಿ ನೀರಿನಲ್ಲಿ ಬಿಡುತ್ತಾರೆ. ರಥಗಳಂತಿರುವ ತಾಬೂತುಗಳು ಕರ್ಬಲಾ ಕಾಳಗದಲ್ಲಿ ಮಡಿದವರ ಗೋರಿಗಳ ಸಂಕೇತಗಳು, ಈ ಮೆರವಣಿಗೆಯಲ್ಲಿ ಹುಲಿಯ ವೇಷವೂ ಇರುತ್ತದೆ. ಇದು ಕರ್ಬಲಾದಲ್ಲಿ ಸತ್ತ ವೀರರ ದೇಹವನ್ನು ಕಾದುವೆಂದು ಹೇಳಲಾದ ಹುಲಿಗಳನ್ನೂ ಮೆರವಣಿಗೆಯಲ್ಲಿಯ ಪಂಜಾ ಅಥವಾ ಹಸ್ತದ ಐದು ಬೆರಳುಗಳು ಐದು ಜನರನ್ನೂ ಎಂದರೆ ಮಹಮ್ಮದ್ ಪೈಗಂಬರ್, ಅವನ ಅಳಿಯ ಅಲಿ, ಮಗಳು ಫಾತಿಮಾ, ಮತ್ತು ಮೊಮ್ಮಕ್ಕಳು ಹಸನ್ ಮತ್ತು ಹುಸೇನರನ್ನೂ ಪ್ರತಿನಿಧಿಸುತ್ತವೆ.

ಪಂಜಾಗಳು ಇರಾನ್ ಮೊದಲಾದ ಕಡೆಗಳಲ್ಲಿ ಇಲ್ಲವೆನ್ನುತ್ತಾರೆ. ಹುಸೇನನೂ ಅವನ ಕಡೆಯವರೂ ಪಟ್ಟ ಕಷ್ಟ ಮತ್ತು ಸಂಕಟಗಳು ಅರಬ್ಬೀ, ಪರ್ಷಿಯನ್ ಮತ್ತು ಉರ್ದು ಭಾಷೆಗಳಲ್ಲಿ ವಿಶೇಷ ಸಾಹಿತ್ಯಕ್ಕೆ ಅಕರವಾಗಿ ಪರಿಣಮಿಸಿದೆ. ಕೆಲವೆಡೆ ಇದರ ಪಾರಾಯಣವೂ ಈ ಹಬ್ಬದಲ್ಲಿ ನಡೆಯುತ್ತದೆ.
(ಕೆ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ